ಶಾಹಬಾದ
 	ಭಾರತದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಒಂದು ಪಟ್ಟಣ ಗುಂತಕಲ್ಲು-ಮುಂಬಯಿ ಬ್ರಾಡ್‍ಗೇಜ್ ರೈಲುಮಾರ್ಗದಲ್ಲಿ ಗುಲ್ಬರ್ಗದ ದಕ್ಷಿಣಕ್ಕೆ 40 ಕಿಮೀ ದೂರದಲ್ಲೂ ಚಿತ್ತಾಪುರದ ಪಶ್ಚಿಮಕ್ಕೆ 16 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 50,587. ಪುರಸಭಾಡಳಿತವಿದೆ.

	ಈ ಪಟ್ಟಣಕ್ಕೆ ಸು.2 ಕಿಮೀ ದೂರದಲ್ಲಿ ಕಾಗಿಣಾ ನದಿ ಹರಿಯುವುದು. ಇದರ ನೀರನ್ನೇ ಪಟ್ಟಣಕ್ಕೂ ಹತ್ತಿರದ ಸಿಮೆಂಟ್ ಕಾರ್ಖಾನೆಗೂ ಉಪಯೋಗಿಸಲಾಗುತ್ತಿದೆ. ಇದೊಂದು ವ್ಯಾಪಾರ ಕೇಂದ್ರ. 

	ಈ ಪಟ್ಟಣದ ಸುತ್ತಮುತ್ತ ಉತ್ತಮ ಸುಣ್ಣಕಲ್ಲುಗಳ ನಿಕ್ಷೇಪವಿದ್ದು ಶಾಹಬಾದಿನ ಉತ್ತರಕ್ಕೆ ಎರಡು ಕಿಮೀ ದೂರದಲ್ಲಿ ಪ್ರಸಿದ್ಧ ಎ.ಸಿ.ಸಿ. ಸಿಮೆಂಟ್ ಕಾರ್ಖಾನೆ ಇದೆ. ಪಟ್ಟಣದ ಮಧ್ಯದಲ್ಲಿ ಶಿಲಾರಚನೆಯ ಆವರಣವೊಂದಿದೆ. ಅದು ಹಳೆಯ ಕಾಲದ ಅರಮನೆಯ ಗೋಡೆಯೆಂದು ಹೇಳುತ್ತಾರೆ. ಈ ಆವರಣದಲ್ಲಿ ಒಂದು ದೊಡ್ಡ ಮಸೀದಿ ಹಾಗೂ ಒಂದು ಬಾವಿ ಇವೆ. ಕಟ್ಟಡ ನಿರ್ಮಾಣಕ್ಕೆ ಶಾಹಬಾದ್ ಕಲ್ಲು ಅತ್ಯಂತ ಪ್ರಸಿದ್ಧ.					
				(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ